ರಂ.ಶ್ರೀ.ಮುಗಳಿ : - ೧೯೦೬-೯೩. ಶಿಕ್ಷಣ ಮತ್ತು ಸಾಹಿತ್ಯಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದ ಪ್ರಸಿದ್ಧ ವಿದ್ವಾಂಸರು. ರಂಗನಾಥ ಶ್ರೀನಿವಾಸ ಮುಗಳಿ ಪೂರ್ಣ ಹೆಸರು. ಧಾರವಾಡ ಜಿಲ್ಲೆಯ ಹೊಳೆ ಆಲೂರಿನಲ್ಲಿ 1906 ಜುಲೈ 15ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಬಾಗಲಕೋಟೆ ವಿಜಯಪುರಗಳಲ್ಲಿ ನಡೆಯಿತು. ಗಾಂಧೀಜಿಯವರ ಅಸಹಕಾರ ಚಳವಳಿಗೆ ಮಾರುಹೋಗಿ 1920ರ ಸುಮಾರಿಗೆ ಶಾಲೆ ಬಿಟ್ಟರು. 1924ರಲ್ಲಿ ಧಾರವಾಡದ ಕಾಲೇಜಿನಲ್ಲಿ ಶಿಕ್ಷಣವನ್ನು ಪುನಃ ಆರಂಭಿಸಿ ಬಿ. ಎ. (ಸಂಸ್ಕøತ ಆನರ್ಸ್) ಎಂ. ಎ. ಕನ್ನಡ ಪದವಿಯನ್ನೂ (1930) ಪಡೆದರು. ಅನಂತರ ಬಿ. ಟಿ. ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿದರು. 1932ರಲ್ಲಿ ಹುಬ್ಬಳಿಯ ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿ ಶಿಕ್ಷಕರಾದರು. ಅನಂತರ ಸಾಂಗಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾದರು (1933). 1961ರಲ್ಲಿ ಅದೇ ಕಾಲೇಜಿನಲ್ಲಿ ಪ್ರಿನ್ಸಿಪಾಲರಾದರು. 1966ರ ತನಕವೂ ಆ ಹುದ್ದೆಯಲ್ಲಿದ್ದು ನಿವೃತ್ತರಾದ ಅನಂತರ ಸುಮಾರು ಆರು ತಿಂಗಳಕಾಲ ಕರ್ನಾಟಕ ಸರ್ಕಾರದ ಸಾಹಿತ್ಯ ಸಂಸ್ಕøತಿ ಇಲಾಖೆಯ ನಿರ್ದೇಶಕರಾಗಿದ್ದರು. 1967ರಿಂದ 70ರ ತನಕ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.

	ಧಾರವಾಡದ ಗೆಳೆಯರ ಗುಂಪಿನಲ್ಲಿ ಬೇಂದ್ರೆ, ಗೋಕಾಕರ ಸಹಚರ್ಯೆಯಿಂದ ಕಾವ್ಯಸಾಧನೆಯಲ್ಲಿ ತೊಡಗಿ ತಮ್ಮ ವಿಶಿಷ್ಟ ವ್ಯಕ್ತಿತ್ವವನ್ನು ಅರಳಿಸಿಕೊಂಡ ಮುಗಳಿಯವರು ಸಾಹಿತ್ಯ ಚರಿತ್ರೆಕಾರರಾಗಿ, ವಿಮರ್ಶಕರಾಗಿ ಕನ್ನಡನಾಡಿನಲ್ಲಿ ಸುವಿಖ್ಯಾತರಾಗಿದ್ದು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಇವರ ಕನ್ನಡ ಸಾಹಿತ್ಯ ಚರಿತ್ರೆ (1953) ಎಂಬ ಗ್ರಂಥ ಕನ್ನಡ ಸಾಹಿತ್ಯ ಚರಿತ್ರೆಗಳ ಸಾಲಿನಲ್ಲಿ ಒಂದು ಮಹತ್ತ್ವದ ಕೃತಿ. ರನ್ನನ ಕೃತಿರತ್ನ, °ತವನಿಧಿ, ಸಾಹಿತ್ಯ ವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು. ಕನ್ನಡ ಸಾಹಿತ್ಯದಲ್ಲಿ ಸಂಸ್ಕøತಿಯ ದರ್ಶನ-ಈ ಗ್ರಂಥಗಳಲ್ಲದೆ. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತ ಕನ್ನಡ ಸಾಹಿತ್ಯದ ವಿವಿಧ ರೂಪಗಳು ಮತ್ತು ಪ್ರಾಚೀನ ಕವಿ-ಕಾವ್ಯಗಳನ್ನು ಕುರಿತ ಇವರ ವಿಮರ್ಶಾಕೃತಿಗಳು, ಲೇಖನಗಳು ಇವರ ಆಳವಾದ ಪಾಂಡಿತ್ಯ ಮತ್ತು ಸಮನ್ವಯ ಮನೋಧರ್ಮಕ್ಕೆ, ಮುಕ್ತ ವಿಮರ್ಶೆಗೆ ನಿದರ್ಶನಗಳಾಗಿವೆ. ಇಂಗ್ಲಿಷಿನಲ್ಲಿ ಇವರು ಬರೆದ ಹೆರಿಟೇಜ್ ಆಫ್ ಕರ್ನಾಟಕ (1946) ಎಂಬ ಗ್ರಂಥ ಕನ್ನಡಿಗರ ಸಾಂಸ್ಕøತಿಕ ಪರಂಪರೆಯ ಸಮೀಕ್ಷೆಯಾಗಿದೆ.

	ಇವರು ಕಾವ್ಯ, ಸಣ್ಣಕತೆ, ಕಾದಂಬರಿ, ನಾಟಕ, ಪ್ರಬಂಧ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕವಿಯಾಗಿ ರಸಿಕರಂಗ ಎಂಬ ಕಾವ್ಯನಾಮದಿಂದ ಕನ್ನಡಿಗರಿಗೆ ಚಿರಪರಿಚಿತರು. ಬಾಸಿಗ, ಅಪಾರ ಕರುಣೆ, ಓಂ ಅಶಾಂತಿ ಮುಂತಾದ ಕವನ ಸಂಗ್ರಹಗಳು ಪ್ರಕಟವಾಗಿವೆ. ಹೆಚ್ಚಿನ ಕವನಗಳ ವಸ್ತು ಭಕ್ತಿಭಾವ, ಪ್ರಕೃತಿಸೌಂದರ್ಯ, ರಾಷ್ಟ್ರೀಯತೆ, ಸಂಸಾರ ಇತ್ಯಾದಿ.

	ಅನ್ನ, ಬಾಳುರಿ, ಕಾರಣಪುರುಷ ಇವು ಇವರ ಕಾದಂಬರಿಗಳು. ಅನ್ನ ಎಂಬ ಕಾದಂಬರಿ ಬರಗಾಲದ ಭೀಕರ ಬದುಕನ್ನು ಕುರಿತದ್ದು. ಬಾಳುರಿ ನಿರುದ್ಯೋಗ ಸಮಸ್ಯೆ ಹಾಗೂ ಬದುಕಿನ ಹೋರಾಟ ಚಿತ್ರಿಸುತ್ತದೆ. ಕಾರಣ ಪುರುಷ ಕನ್ನಡ ಸೇವೆಗೆ ಕಂಕಣಬದ್ಧನಾದ ವ್ಯಕ್ತಿಯೊಬ್ಬನ ಜೀವನದ ವಿವರಗಳನ್ನು ನೀಡುತ್ತದೆ. ಇವರ ನಾಟಕಗಳಲ್ಲಿ ಹೆಚ್ಚಿನವು ಸಾಮಾಜಿಕ ವಸ್ತುವನ್ನು ಒಳಗೊಂಡಿರುವಂಥವು. ಎತ್ತಿದ ಕೈ ಇವರ ಆಯ್ದ ಹತ್ತು ಏಕಾಂಕ ನಾಟಕಗಳನ್ನು ಒಳಗೊಂಡ ಸಂಕಲನ. ನಾಮಧಾರಿ, ಮನೋರಾಜ್ಯ ಧನಂಜಯ-ಇವು ದೊಡ್ಡ ನಾಟಕಗಳು. ಈ ನಾಟಕಗಳು ಆ ಕಾಲಕ್ಕೆ ಕನ್ನಡನಾಡಿನಲ್ಲಿ ಅಪಾರ ಜನಮನ್ನಣೆಗಳಿಸಿದ್ದುವು.

	ಇವರು ಹೊರನಾಡ ಕನ್ನಡಿಗರ ಸಂಘಟನೆಗಾಗಿಯೂ ಅಪಾರವಾಗಿ ದುಡಿದಿದ್ದಾರೆ. ಕನ್ನಡ ನಾಡಿನ ಹೊರಗಿದ್ದರೂ ಕನ್ನಡನಾಡು ನುಡಿಯ ಏಳ್ಗೆಗಾಗಿ ಅವಿರತ ಶ್ರಮಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಕನ್ನಡಿಗರ ಪ್ರೌಢವ್ಯಾಸಂಗಕ್ಕೆ ಸಾಕಷ್ಟು ಅವಕಾಶವಿಲ್ಲದ್ದಿದಂಥ ಕಾಲದಲ್ಲಿ ಇವರ ಪರಿಶ್ರಮದಿಂದ ಕನ್ನಡ ವಿಭಾಗ ಅಲ್ಪಾವಧಿಯಲ್ಲಿಯೇ ವಿಸ್ತಾರ ಹೊಂದಿದ್ದು ಇವರ ದಕ್ಷತೆ ಮತ್ತು ಕನ್ನಡ ನಿಷ್ಠೆಗೆ ಸಾಕ್ಷಿ. ಇಂದು ಮಹಾರಾಷ್ಟ್ರ ಹಾಗೂ ಕರ್ನಾಟಕದ ಶಿಕ್ಷಣ ರಂಗದಲ್ಲಿ ಕೆಲಸ ಮಾಡುತ್ತಿರುವ ಅನೇಕ ಕನ್ನಡ ಪದವೀಧರರು ಮುಗಳಿಯವರ ಶಿಷ್ಯವೃಂದಕ್ಕೆ ಸೇರಿದವರು.

	ಸಾಹಿತ್ಯಸೇವೆಗಾಗಿ ಇವರಿಗೆ ಅನೇಕ ಸನ್ಮಾನಗಳು ಲಭಿಸಿವೆ. ಜೀವನ ಪತ್ರಿಕೆಯ ಆರಂಭದಲ್ಲಿ ಕೆಲಕಾಲ ಇವರು ಅದರ ಸಂಪಾದಕರಾಗಿದ್ದರು (1940-43). 1941 ರಲ್ಲಿ ಹೈದರಾಬಾದಿನಲ್ಲಿ ನಡೆದ 26ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಟಕ ಗೋಷ್ಠಿಯ ಆದ್ಯಕ್ಷರಾಗಿದ್ದರು. ಮೈಸೂರಿನಲ್ಲಿ ನಡೆದ 37ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (1955) ವಿಮರ್ಶಾ ಗೋಷ್ಠಿಯ ಅಧ್ಯಕ್ಷರಾಗಿದ್ದರು. 1956ರಲ್ಲಿ ಇವರ ಕನ್ನಡ ಸಾಹಿತ್ಯ ಚರಿತ್ರೆ ಗ್ರಂಥಕ್ಕೆ ಪುಣೆ ವಿಶ್ವವಿದ್ಯಾಲಯದ ಡಿ. ಲಿಟ್. ಪದವಿಯೂ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವೂ ಲಭಿಸಿದುವು. ಸಿದ್ಧಗಂಗಾದಲ್ಲಿ (ತುಮಕೂರು) ನಡೆದ 44ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರಾಗಿ ಮಾಡುವುದರ ಮೂಲಕ ಕನ್ನಡನಾಡು ತನ್ನ ಕೃತಜ್ಞತೆ ಅರ್ಪಿಸಿತು (1963). 1964ರಲ್ಲಿ ಇಂಕ್ಲಾ ಸಂಸ್ಥೆಯ ಪರವಾಗಿ ಫ್ರಿಬುವಿನಲ್ಲಿ ನೆರೆದಿದ್ದ ಜಾಗತಿಕ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಇಷ್ಟೇ ಅಲ್ಲದೆ ಮುಗಳಿಯವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಕನ್ನಡ ಸಾಹಿತ್ಯ ಚರಿತ್ರೆಯ ಕಾರ್ಯನಿರ್ವಾಹಕ ಸಂಪಾದಕರು ಆಗಿದ್ದರು. ಕನ್ನಡ ಸಾಹಿತ್ಯ ಚರಿತ್ರೆಯ ಕಾರ್ಯನಿರ್ವಾಹಕ ಸಂಪಾದಕರು ಆಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಯೋಜನೆಗಳಲ್ಲಿಯೂ ಇವರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ.						

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ